ಪಾಲೆಂಬಾಂಗ್	-	
ಇಂಡೊನೇಷ್ಯ ಗಣರಾಜ್ಯದ ದಕ್ಷಿಣ ಸುಮಾತ್ರ ಪ್ರಾಂತ್ಯದ ಆಡಳಿತ ಕೇಂದ್ರ ಮತ್ತ ನದೀರೇವು. ಸುಮಾತ್ರದ ಅತ್ಯಂತ ದೊಡ್ಡನಗರ. ಮೂಸೀ ನದಿಯ ಎರಡು ದಂಡೆಗಳ ಮೇಲೂ ನಗರ ಹಬ್ಬಿದೆ. ನದೀ ಮುಖದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಈ ನಗರದ ಜನಸಂಖ್ಯೆ 8,90,732 (2001).

ಸುಮಾತ್ರದೊಂದಿಗೆ ಭಾರತದ ಸಂಬಂಧ ವಿಶೇಷವಾಗಿ ಬೆಳೆದಾಗ ಇದು ಪ್ರಸಿದ್ಧವಾಯಿತು. ಕ್ರಿಸ್ತಶಕದ ಆರಂಭದಿಂದ 14 ನೆಯ ಶತಮಾನದವರೆಗೆ ಭಾರತೀಯ ಸಂಸ್ಕøತಿ ಇಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇದೊಂದು ಪ್ರಮುಖ ಬಂದರೂ ಆಗಿತ್ತು. 
ಇದು 7ನೆಯ ಶತಮಾನದಲ್ಲಿ ಶ್ರೀವಿಜಯನ ಸುಮಾತ್ರ ದೇಶಕ್ಕೂ ತರುವಾಯ ಬಹುಕಾಲ ಸುಲ್ತಾನರ ರಾಜ್ಯಕ್ಕೂ ರಾಜಧಾನಿಯಾಗಿತ್ತು. ಶೈಲೇಂದ್ರರ ಆಳ್ವಿಕೆಯ ಅನಂತರ ಮಜಪಹಿತ್ ದೊರೆಗಳ ಪತನವಾದಾಗ ಇದರ ಖ್ಯಾತಿ ತಗ್ಗಿತು. 1617ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಇಲ್ಲಿ ವ್ಯಾಪಾರದ ಕಟ್ಟೆಯನ್ನು ಸ್ಥಾಪಿಸಿ 1658 ರಲ್ಲಿ ಕೋಟೆಯನ್ನು ಕಟ್ಟಿತು. ಡಚ್ ಈಸ್ಟ್ ಇಂಡೀಸ್ ದ್ವೀಪಗಳನ್ನು ಬ್ರಿಟಿಷರು ಹಂಗಾಮಿಯಾಗಿ ಆಕ್ರಮಿಸಿಕೊಂಡಿದ್ದಾಗ ಸುಮಾತ್ರದ ಸುಲ್ತಾನ ಬ್ರಿಟಿಷರ ಅಧಿಕಾರಕ್ಕೊಳಪಟ್ಟಿದ್ದ. (1811). ಆಗ ಸುಲ್ತಾನ ಅಲ್ಲಿ ನೆಲೆಸಿದ್ದ ಅನೇಕ ಡಚ್ಚರನ್ನು ಕೊಲೆ ಮಾಡಿದ. ಬ್ರಿಟಿಷರು ಸುಲ್ತಾನನನ್ನು ರಾಜಧಾನಿಯಿಂದ ಓಡಿಸಿ ಅವನ ಸಹೋದರನನ್ನು ಸುಲ್ತಾನನನ್ನಾಗಿ ನೇಮಿಸಿದರು. 1825ರಲ್ಲಿ ಡಚ್ಚರು ಸುಲ್ತಾನನ ಆಡಳಿತವನ್ನು ರದ್ದುಮಾಡಿ, ಆಡಳಿತ ನಿರ್ವಹಿಸಲು ಡಚ್ ರೆಸಿಡೆಂಟನನ್ನು ನೇಮಿಸಿದರು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನ್ ಪಾಲೇಬಾಂಗ್‍ನ್ನು ಆಕ್ರಮಿಸಿತ್ತು. (1942-1945) ಅನಂತರ ಇದು ಇಂಡೋನೇಷ್ಯ ಗಣರಾಜ್ಯದ ಅಂಗವಾಯಿತು.										(ವಿ.ಜಿ.ಕೆ.)

ಪಾಲೆಂಬಾಂಗ್‍ನಲ್ಲಿ ದೊರಕಿರುವ ಅತ್ಯಂತ ಪ್ರಾಚೀನ ಶಿಲ್ಪವೆಂದರೆ 3.4 ಮೀಟರ್ ಎತ್ತರದ ಬುದ್ಧನ ಮೂರ್ತಿ. ಇದು ಭಾರತದ (ಆಂಧ್ರದ) ಅಮರಾವತಿ ಶಿಲ್ಪಶೈಲಿಯಲ್ಲಿದೆ. ದೂರ ಪ್ರಾಚ್ಯಕ್ಕೆ ವಲಸೆ ಹೋದ ಭಾರತೀಯ ಮೂಲ ನಿವಾಸಿಗಳು ಆಂಧ್ರರು ಎನ್ನುವುದನ್ನು ದೃಢಪಡಿಸುತ್ತದೆ ಎಂದು ಅನೇಕರ ವಾದ. ಇದು ಹೇಗಾದರೂ ಇರಲಿ, ಭಾರತಕ್ಕೂ ಆಗ್ನೇಯ ಏಷ್ಯ ರಾಜ್ಯಗಳಿಗೂ ಅಮರಾವತಿಯ ಶಿಲ್ಪಶೈಲಿಯ ಕಾಲದಲ್ಲೂ ಸಂಬಂಧಗಳಿದ್ದುವೆಂಬುದನ್ನು ಮಾತ್ರ ಎಲ್ಲರೂ ಒಪ್ಪಿದ್ದಾರೆ. ಪಾಲೇಬಾಂಗಿನ ಸುತ್ತಮುತ್ತಲ ಪ್ರದೇಶದಲ್ಲಿ ಬೌದ್ಧ ಧರ್ಮ ವಿಶೇಷವಾಗಿ ಪ್ರಚಲಿತವಾಗಿತ್ತೆಂದೂ ತಿಳಿಯುತ್ತದೆ. ಇಲ್ಲಿಯೇ ದೊರಕಿರುವ ಕಂಚಿನ ವಿಗ್ರಹಗಳ ರಾಶಿಯೂ ಬಹಳ ಮುಖ್ಯವಾದವು. ಇವುಗಳಲ್ಲಿ ಮೈತ್ರೇಯ. ಲೋಕೇಶ್ವರ. ಅವಲೋಕೀತೇಶ್ವರ, ಶಾಕ್ಯಮುನಿ ಮುಂತಾದ ವಿಗ್ರಹಗಳಿವೆ. ಇವು ಸಣ್ಣ ಕಂಚಿನ ವಿಗ್ರಹಗಳಾದರೂ ಪೂರ್ಣ ಭಾರತೀಯ ಲಕ್ಷಣಗಳಿಂದ ಕೂಡಿವೆ. ಇವುಗಳಲ್ಲಿ ಪಾಲ ವಂಶದ ಶಿಲ್ಪ ಲಕ್ಷಣಗಳು ಕಂಡುಬರುತ್ತವೆ. ಪಾಲರ ಕಾಲದಲ್ಲಿ ಬಂಗಾಲದಿಂದ ಸುಮಾತ್ರಕ್ಕೆ ಜನರು ವಿಶೇಷವಾಗಿ ಹೋಗುತ್ತಿದ್ದರೆಂದು ಇದರಿಂದ ಹೇಳಬಹುದಾಗಿದೆ. ಒಟ್ಟಿನಲ್ಲಿ ಪಾಲೆಂಬಾಂಗ್ ಭಾರತೀಯ ಸಂಸ್ಕøತಿಯನ್ನು ಸುಮಾತ್ರದಲ್ಲಿ ಹರಡಲು ಮತ್ತು ಉಳಿಸಲು ವಿಶೇಷವಾಗಿ ಸಹಾಯ ಮಾಡಿತೆನ್ನಬಹುದು. ಈ ದೃಷ್ಟಿಯಿಂದ ಅದು ಮುಖ್ಯವೆನಿಸಿದೆ.									 (ಎ.ಬಿ.ಎನ್.)

ಪಾಲೆಂಬಾಂಗ್‍ನ ಹಳೆಯ ಕಟ್ಟಡಗಳಲ್ಲಿ ಪ್ರಧಾನವಾದವು ಬೃಹತ್ ಮಸೀದಿ (1840), ವಸ್ತು ಪ್ರದರ್ಶನಾಲಯ ಮತ್ತು ಸುಲ್ತಾನರ ಸಮಾಧಿ ಭವನಗಳು. ಈ ಸಮಾಧಿ ಭವನಗಳಲ್ಲಿ ಒಂದು ಇಂದಿಗೂ ಮುಸ್ಲಿಮರ ಯಾತ್ರಾ ಸ್ಥಳವಾಗಿದೆ. ಆಧುನಿಕ ಕಟ್ಟಡಗಳಲ್ಲಿ ಮುಖ್ಯವಾದವು ಸುಕರ್ನೋ ಜನರಲ್ ಆಸ್ಪತ್ರೆ (1959). ಕ್ರೀಡಾರಂಗ, ಸೆರಿವಿಡ್ಜಾಜ ವಿಶ್ವವಿದ್ಯಾಲಯ (1955), ಮತ್ತು ದಕ್ಷಿಣ ಸುಮಾತ್ರದ ಪ್ರಾಂತೀಯ ಸಂಸತ್ ಕಟ್ಟಡ. 

ಪಾಲೆಂಬಾಂಗ್ ಬಳಿ ಮೂಸೀ ನದಿಯ ಸರಾಸರಿ ಅಗಲ 274 ಮೀ. ಆಳ 28 ಮೀ. ಸಮುದ್ರಯಾನದ ದೊಡ್ಡ ಹಡಗುಗಳು ಇಲ್ಲಿಯ ರೇವಿಗೆ ಬಂದು ಹೋಗುತ್ತವೆ. ಸೇತುವೆಗಳ ಮೂಲಕ ಮೂಸೀ ನದಿಯ ಎರಡು ದಂಡೆಗಳಿಗೂ ಸಂಪರ್ಕ ಕಲ್ಪಿಸಲಾಗಿದೆ. ಅನೇಕ ನಾಲೆಗಳನ್ನು ಮುಚ್ಚಿ ಅವುಗಳ ಮೇಲೆ ವಿಶಾಲವಾದ ರಸ್ತೆಗಳನ್ನು ನಿರ್ಮಿಸಿದ್ದಾರೆ. ಆದರೆ ಈಗಲೂ ಸಾಂಪ್ರದಾಯಿಕವಾದ ತೇಲು ಹಡಗು ಮನೆಗಳು ನಾಲೆಗಳಲ್ಲಿ ಸಂಚರಿಸುತ್ತವೆ. ಒಳನಾಡಿನ ವ್ಯಾಪಾರ ಹೆಚ್ಚಾಗಿ ನದಿ ಮತ್ತು ರಸ್ತೆಗಳ ಮೂಲಕ ನಡೆಯುತ್ತದೆ. ಪಾಲಿಂಬಾಂಗ್ ರೇವಿಗೂ ಮಲಯ ಪರ್ಯಾಯ ದ್ವೀಪದ ಪೂರ್ವ ಭಾಗಕ್ಕೂ ಥೈಲೆಂಡಿಗೂ ಚೀನಾಕ್ಕೂ ವ್ಯಾಪಾರ ಸಂಪರ್ಕವಿದೆ. ನಗರದಿಂದ ಸುಮಾತ್ರದ ಇತರ ಭಾಗಗಳಿಗೂ ಜಾವಾ ದ್ವೀಪಕ್ಕೂ ಸಂಚಾರ ಸೌಲಭ್ಯಗಳುಂಟು. ಈ ನಗರ ದಕ್ಷಿಣ ಸುಮಾತ್ರದ ರೈಲ್ವೆ ಕೇಂದ್ರ ಮತ್ತು ಭಾರಿ ಜಂಕ್ಷನ್. ನಗರದ ವಾಯುವ್ಯಕ್ಕೆ 14 ಕಿ.ಮೀ. ದೂರದಲ್ಲಿ ಲೆಂಗ್ ಬೆಟುಟು ವಿಮಾನ ನಿಲ್ದಾಣವಿದೆ. ಇಲ್ಲಿಂದ ಇಂಡೊನೇಷ್ಯದ ಅನೇಕ ನಗರಗಳಿಗೆ ವಿಮಾನಗಳೂ ಹೋಗಿಬರುತ್ತವೆ. 

ರಬ್ಬರ್ ವಸ್ತುಗಳು, ರಸಗೊಬ್ಬರ, ಪ್ಲಾಸ್ಟಿಕ್ ಸರಕು ಮೊದಲಾದವು ಇಲ್ಲಿ ತಯಾರಾಗುತ್ತವೆ. ಇಲ್ಲಿ ತೈಲ ಶುದ್ಧೀಕರಣ ಕೇಂದ್ರಗಳಿವೆ. ಇಲ್ಲಿಂದ ರಫ್ತಾಗುವ ಸರಕುಗಳು ಚೌಬೀನೆ, ಕಾಫಿ, ಪೆಟ್ರೋಲ್, ರಬ್ಬರ್, ಚಹ, ಸಂಬಾರ, ಭತ್ತ ಮತ್ತು ಮೆಣಸು. ಸ್ವಾತಂತ್ರ್ಯಾ ದಿನದಂದು ಆಗಸ್ಟ್ (7) ಇಲ್ಲಿ ನಡೆಯುವ ದೋಣಿಗಳ ಸ್ಪರ್ಧೆ ಜನಪ್ರಿಯವಾಗಿದೆ. 		(ವಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ